ಅಭೀಪ್ಪಿತಾರ್ಥ ಸಿದ್ಧರ್ಥಂ ಪೂಜಿತೋಯಃ ಸುರೈರಪಿ |
ಸರ್ವ ವಿಘ್ನಚ್ಛಿದೇ ತಸ್ವಯೈ ಗಣಾಧಿಪತಯೇ ನಮಃ ||
ದೇವತೆಗಳಲ್ಲಿ ಸರ್ವೋತ್ತಮನಾದವನು ಮಹಾವಿಷ್ಣು ಅವನೇ ಒಬ್ಬೊಬ್ಬ ದೇವತೆಗಳಲ್ಲಿ ಇದ್ದು ಆಯಾಯ ದೇವತೆಗಳಿಂದ ಒಂದೊಂದು ಕೆಲಸ ಮಾಡಿಸುತ್ತಾನೆ. ಗಣೇಶನ ಅಂತರ್ಯಾಮಿಯಾಗಿ ವಿಶ್ವಂಭರನಾಗಿದ್ದುಕೊಂಡು ಸಕಲ ವಿಘ್ನವಿನಾಶ ಮಾಡಿಸುತ್ತಾನೆ. ಆದ್ದರಿಂದ ವಿಘ್ನನಾಶಕೋಸ್ಕರ
ಶುಕ್ಲಾಂಭರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ |
ಪ್ರಸನ್ನ ವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ ॥
ವಿಷ್ಣುವನ್ನೇ ವಿಘ್ನವಿನಾಶಕ್ಕಗಿ ಸ್ತೋತ್ರ ಮಾಡುತ್ತೇವೆ. ವಿಘ್ನನಾಶನ ಮಾಡುವಂತಹ ಒಂದು ವಿಷ್ಣುವಿನ ವಿಭೂತಿ ರೂಪ ಗಣೇಶನ ಒಳಗೆ ಇದೆ. ಈ ಗಣೇಶನು ನಾನು ದುಷ್ಟರಿಗೆ ವಿಘ್ನವನ್ನು ಉಂಟು ಮಾಡುವವನು. ಪುಣ್ಯವಂತರಾದ ಸಜ್ಜನರ ಸಮೂಹಕ್ಕೆ ಉಂಟಾಗುವ ವಿಘ್ನಗಳನ್ನು ಪರಿಹರಿಸುವವನು ಆಗಿದ್ದೇನೆ ಎಂದು ಹೇಳಿದ್ದಾನೆ. ಇದನ್ನು ಲೋಕಕ್ಕೆ ತಿಳಿಸುವುದಕ್ಕೋಸ್ಕರ ರಾವಣನ ಇಚ್ಛೆಗೆ ವಿಘ್ನವನ್ನು ಉಂಟುಮಾಡಿದ ದೇವತೆಗಳು ಮತ್ತು ಮುನಿಗಳ ಸಮೂಹದ ಅಭೀಷ್ಠ ಪ್ರಾಪ್ತಿಗೆ ಉಪಾಯ ರೂಪನಾಗಿರುವ ಗಣೇಶನು ಆತ್ಮಲಿಂಗವನ್ನು ಗೋಕರ್ಣದಲ್ಲಿ ಇಟ್ಟು ಬಿಟ್ಟ. ಗೋಕರ್ಣ ವಿಷಯವಾಗಿ ಹೇಳುವುದಾದರೆ ಹಿಂದೆ ರಾವಣನು ಈಶ್ವರನನ್ನು ಕುರಿತು ತಪಸ್ಸು ಮಾಡಿದಾಗ ಈಶ್ವರನು ಪ್ರಸನ್ನನಾಗಿ ತನ್ನ ಸನ್ನಿಧಾನ ಯುಕ್ತವಾದ ಲಿಂಗವನ್ನು ಕೊಟ್ಟು “ಈ ಲಿಂಗವು ನಿನ್ನ ಮನೆಯಲ್ಲಿ ಇರುವವರೆಗೆ ಯಾರು ನಿನ್ನನ್ನು ಜಯಿಸಲಾರರು. ಆದರೆ ನೀನು ಈ ಲಿಂಗವನ್ನು ದಾರಿಯಲ್ಲಿ ಎಲ್ಲೂ ಇಡಕೂಡದು. ಇಟ್ಟರೆ, ತಿರುಗಿ ತೆಗೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ.” ಎಂದು ಹೇಳಿದನು. ಈ ಸಮಯದಲ್ಲಿ ರಾವಣನ ಬಳಿ ಲಿಂಗ ಇರುತ್ತಿದ್ದರೆ, ಅವನ ದುರಾಚಾರ ಇನ್ನೂ ಹೆಚ್ಚಾಗುತ್ತಿತ್ತು ಹಾಗಾಗಿ ಅವನ ಪಾಲಿಗೆ ವಿಘ್ನು ಕೊಟ್ಟು ಲಿಂಗವು ಸಜ್ಜನರ ಉದ್ಧಾರಕ್ಕಾಗಿ ಗೋಕರ್ಣದಲ್ಲಿ ಪ್ರತಿಷ್ಠಾಪನೆಗೊಳ್ಳಲು ಕಾರಣನಾದ.
ಇಂತಹ ಗಣೇಶನು ನಾನಾ ಹೆಸರಿನಿಂದ ಕರೆಸಿಕೊಳ್ಳುವನಾಗಿದ್ದಾನೆ. ವಿಘ್ನೇಶ್ವರ, ಏಕದಂತ, ರಕ್ತಾಂಭರ ಇತ್ಯಾದಿಯಾಗಿ ಇವನು ಪರಮ ಹರಿಭಕ್ತ, ಶಿವಪುತ್ರ, ವ್ಯಾಸಕರುಣಾಪುತ್ರ ಹೇಗೆಂದರೆ ವೇದವ್ಯಾಸರಿಂದ ಮಹಾಭಾರತಾದಿ ಲೇಖನ ಕಾರ್ಯದಲ್ಲಿ ನೇಮಿಸಲ್ಪಟ್ಟಿದ್ದನು. ಮಹಾ ಭಾರತದ 8800 ಕೋಟಿ ಶ್ಲೋಕಗಳನ್ನು ಅರ್ಥ ಮಾಡಿಕೊಂಡು ಬರೆದ ಮಹಾಪುರುಷ ಮತ್ತು ಆಕಾಶ ತತ್ವಕ್ಕೆ ಅಭಿಮಾನಿ. ಇವನು ಒಂದು ದಂತವನ್ನು ಲೇಖನಿ ಮಾಡಿಕೊಂಡಿದ್ದ ಹಾಗೂ ದೈತ್ಯನ ಸಂಹಾರಕ್ಕಾಗಿ ಒಂದು ದಂತವನ್ನು ಕಿತ್ತೆಸೆದು ಏಕದಂತ ಎಂಬ ಹೆಸರು ಪಡೆದ ಉಲ್ಲೇಖ ಇದೆ. ಇವನು ದೇವತೆಗಳ ಸಾಲಿನಲ್ಲಿ ಕುಭೇರ. ವಿಶ್ವಕ್ಸನ ಮತ್ತು ಅಶ್ವಿನೀ ದೇವತೆಗಳಿಗೆ ಸಮಾನ ಕಕ್ಷೆಯಲ್ಲಿರುವವನು.
ಇಲಿ ರೂಪದಿಂದ ಬಂದಿದ್ದ ದುಷ್ಟದೈತ್ಯನನ್ನು ಪರಾಭವಗೊಳಿಸಿ ಅವನನ್ನು ವಾಹನವನ್ನಾಗಿ ಮಾಡಿಕೊಂಡ ಮಹಾನುಭಾವ ಇವನು. ಕಲೌ ಸತ್ಯವಿನಾಯಕೌ ಎಂಬ ಮಾತಿನಂತೆ ಕಲಿಯುಗದಲ್ಲಿ ಬೇಡಿದವರ ಇಷ್ಟಾರ್ಥವನ್ನು ತ್ವರೆಯಿಂದ ಈಡೇರಿಸುವವನಾದ್ದರಿಂದ ಇವನು ಕ್ಷಿಪ್ರ ಪ್ರಸಾದ ಎಂದೇ ಪ್ರಖ್ಯಾತಿಯಾಗಿರುವನು ಮತ್ತು ಗಣೇಶನು ಸಿದ್ಧಿವಿನಾಯಕ, ಬುದ್ಧಿವಿದ್ಯಾ ಪ್ರದಾಯಕ, ಶುದ್ಧಭಕ್ತಿವಿರಕ್ತಿದಾಯಕ, ಏಕವಿಂಶತಿಮೋದಕಪ್ರಿಯ ಲೇಖಕಾಗ್ರಹಿ, ಗೌರಿತನಯ, ಮೃದ್ಭವ, ಮಣ್ಣಿನಿಂದ ಜನಿಸಿದವನು ಮಂಗಳ ಮೂರ್ತಿ ಎಂಬ ನಾನಾ ಅನ್ವರ್ಥದಿಂದ ಕರೆಸಿಕೊಳ್ಳಲ್ಪಡುವನು.ಇಂತಹ ಗಣೇಶನಲ್ಲಿ ನಮ್ಮ ಪ್ರಾರ್ಥನೆ “ಕೆಟ್ಟ ಜನ್ಮ ಬಂದರೂ ಚಿಂತೆಯಿಲ್ಲ, ಕೆಟ್ಟ ಜ್ಞಾನ ಬರದಿರಲಿ” ಎಂದು.
ಎನ್. ಸುಬ್ರಹ್ಮಣ್ಯ ಹೊಳ್ಳ
ಸಂಸ್ಕೃತ ಪಂಡಿತರು ಮತ್ತು ಪುರೋಹಿತರು
ಕೇಪುಳು, ಪುತ್ತೂರು
Leave a Reply