ಇತಿಹಾಸ

ಲೇಖನ:

ಪ್ರೊ. ವಿ. ಬಿ. ಅರ್ತಿಕಜೆ

ಪರ್ಲಡ್ಕ, ಪುತ್ತೂರು

ದೇವತಾ ರಶ್ಮಿ, 2017

ಶ್ರೀ ಗಣೇಶೋತ್ಸವ : ನಡೆದು ಬಂದ ದಾರಿ

ಜಗನ್ಮಾತೆಯಾದ ಪಾರ್ವತೀ ದೇವಿ ವಿನೋದಕ್ಕೆಂದು ಸಣ್ಣ ಬಾಲಕನ ಮೂರ್ತಿಯನ್ನು ರೂಪಿಸಿದಾಗ ಈತನೇ ಜಗದ್ವಂದ್ಯನಾಗಿ ಮೊದಲ ಪೂಜೆಗೆ ಅರ್ಹನಾಗುವ ಗಣಪತಿಯೆನಿಸುವನೆಂದು ಕನಸು ಕಂಡಿರಲಿಕ್ಕಿಲ್ಲ. ಆದರೆ ದಿನಗಳೆದಂತೆ ಅವನ ಸ್ವರೂಪದೊಂದಿಗೆ ಹಕ್ಕು ಹೊಣೆಗಾರಿಕೆಗಳು ಬದಲಾಗಿ ತ್ರಿಮೂರ್ತಿಗಳಿಂದ ಕೂಡ ಗೌರವಿಸಲ್ಪಡುವ ವಿಘ್ನೇಶ್ವರನೇ ಆದ.

ಪುತ್ತೂರಿನಲ್ಲಿ ಮೊದಲ ಬಾರಿಗೆ 1957ರಲ್ಲಿ ಕೆಲವು ಮಂದಿ ಉತ್ಸಾಹೀ ತರುಣರು ಮತ್ತು ಕುತೂಹಲಿಗಳಾದ ಮಕ್ಕಳನ್ನು ಸೇರಿಸಿಕೊಂಡು ಬೋರ್ಡ್ ಪ್ರಾಥಮಿಕ ಶಾಲೆಯ ಜಗಲಿಯಲ್ಲಿ ಶ್ರೀ ಗಣೇಶೋತ್ಸವವನ್ನು ಪ್ರಾರಂಭಿಸಿದಾಗ ವೈದ್ಯ ಕೆ. ಹನುಮಂತ ಮಲ್ಯರಿಗೆ ಇದೊಂದು ಬೃಹತ್‌ ಪ್ರಮಾಣದಲ್ಲಿ ಬೆಳೆಯುವ ಮಹತ್ತ್ವದ ಘಟನೆಯೆಂದು ಅನ್ನಿಸಿರಲಿಲ್ಲ. ಆದರೆ ಎಲ್ಲ ವಯೋಮಾನದ ಮಹಿಳೆಯರು, ಪುರುಷರು ಜಾತಿ-ಪಂಗಡಗಳ ಭೇದವಿಲ್ಲದೆ ಒಟ್ಟು ಸೇರಬೇಕು. ಗಣಪತಿಯ ಆರಾಧನೆಯಿಂದ ಪುಳಕಿತಗೊಳ್ಳಬೇಕು. ಜತೆಗೆ ಧಾರ್ಮಿಕ ಆಚರಣೆಗಳಿಗೆ ಪೂರಕವಾಗಿ ಸಾಮಾಜಿಕ ಸೇವಾ ಕಾರ್ಯಗಳು ಮತ್ತು ಸಾಂಸ್ಕೃತಿಕ ಕಲಾಪಗಳು ನೆರವೇರಬೇಕು ಎನ್ನುವ ಉದ್ದೇಶ ಅವರದಾಗಿತ್ತು.

ಮೊದಲ ವರ್ಷ ಸಣ್ಣ ರೀತಿಯಲ್ಲಿ ಉತ್ಸವ ಪ್ರಾರಂಭವಾಯಿತು. ಸೇರಿದವರಲ್ಲಿ ಹೆಚ್ಚಿನವರು ಮಕ್ಕಳೇ ಆದ್ದರಿಂದ ಜನ ಈ ಗಣೇಶನನ್ನು ಮಕ್ಕಳ ಗಣಪತಿ ಎಂದು ಕರೆದರು. ರಾಮಕೃಷ್ಣ ಭಟ್ಟ ಎಂಬವರು ತಯಾರಿಸಿದ ವಿಗ್ರಹವನ್ನು ಮಹಾಪೂಜೆಯ ನಂತರ ಲಾರಿಯೊಂದರ ಕ್ಯಾಬಿನ್ ಮೇಲೆ ಇರಿಸಿ ಪೇಟೆಯಲ್ಲಿ ಮೆರವಣಿಗೆ ಮಾಡಲಾಯಿತು. ಕೊನೆಗೆ ನೆಹರುನಗರದ ಸರೋವರದಲ್ಲಿ ವಿಸರ್ಜಿಸಲಾಯಿತು. ಹನುಮಂತ ಮಲ್ಯರು ಈ ಸರೋವರಕ್ಕೆ ಶ್ವೇತ ಸರೋವರ ಎಂಬ ಹೆಸರನ್ನಿತ್ತರು:

ಸ್ಥಾಪಕರ ನೆನಪು

ಪುತ್ತೂರಿನಲ್ಲಿ ಸಾರ್ವಜನಿಕವಾಗಿ ಗಣೇಶೋತ್ಸವ ನಡೆಸುವ ಸಂಪ್ರದಾಯದ ರೂವಾರಿಯಾದವರು ಕೆ. ಹನುಮಂತ ಮಲ್ಯರು. ವೃತ್ತಿಯಿಂದ ಇವರೊಬ್ಬ ವೈದ್ಯರು. ಬಡಜನರಿಗೆ ಉಚಿತವಾಗಿ ಚಿಕಿತ್ಸೆ ನೀಡಿ ಜನಪ್ರಿಯರಾಗಿದ್ದ ಅವರು ಶಿಸ್ತು, ಶ್ರದ್ಧೆ ಹಾಗೂ ನಿಷ್ಠೆಗಳಿಗೆ ಹೆಸರಾದವರು. ಜತೆಗೆ ಹಿಡಿದ ಕೆಲಸವನ್ನು ಕಷ್ಟ ನಷ್ಟಗಳ ನಡುವೆಯೂ ಗುರಿ ಮುಟ್ಟಿಸುವ ಛಲ ಅವರಲ್ಲಿತ್ತು.

ಜನಸೇವೆ ಮತ್ತು ಜನಾರ್ದನ ಸೇವೆ ಎರಡರಲ್ಲೂ ಅವರಿಗೆ ಆಸಕ್ತಿಯಿತ್ತು. ಆದ್ದರಿಂದಲೇ ಅವರು ಪುತ್ತೂರಿನ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮಹಾಲಿಂಗೇಶ್ವರ ದೇವಾಲಯದ ಎದುರಿನ ಕಂಬಳ ಗದ್ದೆಯು ತಮ್ಮ ಸ್ವಾಧೀನವಿದ್ದಾಗ ನಿಂತು ಹೋಗಿದ್ದ ಕಂಬಳ ಕ್ರೀಡೆಯನ್ನು ಒಮ್ಮೆ ನಡೆಸಿದ್ದರು.

ಅಲ್ಲದೆ ದೇವಳದ ರಥಬೀದಿಯನ್ನು ನಿರ್ಮಿಸಿಕೊಡಬೇಕೆಂದು ಬಯಸಿದ್ದರು. ಅವರ ಇಚ್ಛೆಯಂತೆ ಅವರ ನಿಧನಾನಂತರ ಪತ್ನಿ ವತ್ಸಲಾ ಮಲ್ಕರು ದೇವಾಲಯದ ಕಲ್ಯಾಣ ಮಂಟಪ ನಿರ್ಮಾಣಕ್ಕೆ ದೊಡ್ಡ ಮೊತ್ತದ ದೇಣಿಗೆ ನೀಡಿದರು.

ಗಣೇಶೋತ್ಸವವನ್ನು ತಾವೇ ಪ್ರಾರಂಭಿಸಿದ ಮಲ್ಯರು ಊರಿನ ಹಲವರು ಗಣ್ಯರನ್ನು ಸಮಿತಿಯಲ್ಲಿ ಸೇರಿಸಿಕೊಂಡು ಕಲಾಪಗಳನ್ನು ಯಶಸ್ವಿಯಾಗಿ ನೆರವೇರಿಸುತ್ತಾ ಬಂದರು. ಇತರರನ್ನು ಮುಂದಿಟ್ಟುಕೊಂಡು ಕೇವಲ ಕಾರ್ಯಕರ್ತನಾಗಿ, ಸೇವಕನಾಗಿ ದುಡಿಯುವುದು ಅವರ ವಿನಯಶೀಲತೆಗೆ ಸಾಕ್ಷಿ. ಎಲ್ಲಿಯ ತನಕ ಇಲ್ಲಿ ಗಣೇಶನ ಹಬ್ಬ ನಡೆಯುತ್ತದೆಯೋ ಅಲ್ಲಿಯವರೆಗೆ ಹನುಮಂತ ಮಲ್ಯರನ್ನು ಮರೆಯುವುದು ಅಸಾಧ್ಯ.

ಹಬ್ಬಿದ ಹಬ್ಬ :

ಗಣೇಶೋತ್ಸವವು ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆದಿದ್ದು ಕೇವಲ ನಾಲ್ಕು ವರ್ಷ. ಬಳಿಕ ಸಾರ್ವಜನಿಕರ ಮತ್ತು ಭಕ್ತರ ಅನುಕೂಲಕ್ಕಾಗಿ ಕೋರ್ಟ್ (ಕಿಲ್ಲೆ) ಮೈದಾನಕ್ಕೆ ವರ್ಗಾಯಿಸಲಾಯಿತು. ಅಲ್ಲಿ ವಿಶಾಲವಾದ ಚಪ್ಪರ ಹಾಕಿ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಅವಕಾಶ ಮಾಡಿಕೊಡಲಾಯಿತು. ಉತ್ಸವದ ಅವಧಿಯನ್ನು ಏಳು ದಿವಸಗಳಿಗೆ ವಿಸ್ತರಿಸಿದ್ದರಿಂದ ಒಂದು ವಾರದ ಕಾಲ ಸಹಸ್ರಾರು ಮಂದಿಗೆ ಅದರಲ್ಲಿ ಭಾಗವಹಿಸುವ ಅನುಕೂಲತೆ ದೊರೆಯಿತು.

ವಿಶ್ವಂಭರ ಮೂರ್ತಿಯ ಜತೆಗೆ ಅಷ್ಟಸಿದ್ದಿ ವಿನಾಯಕನ ಸಣ್ಣ ವಿಗ್ರಹ ಇರುವುದು ಇಲ್ಲಿನ ವಿಶೇಷವಾಗಿದ್ದು ಕಷ್ಟ ನಿವಾರಣೆ ಮತ್ತು ಇಷ್ಟಪೂರ್ತಿಗಾಗಿ ಹಲವಾರು ಮಂದಿ ಗಣೇಶನಿಗೆ ಹರಕೆ ಹೊರುತ್ತಾರೆ. ಚಿನ್ನದ ಹಾಗೂ ಬೆಳ್ಳಿಯ ಇಲಿ, ಬೆಳ್ಳಿಯ ಗರಿಕೆ, ಘಂಟೆ, ಚಿನ್ನದ ನಾಣ್ಯ ಹಾಗೂ ನೈವೇದ್ಯಕ್ಕೆ ಬೇಕಾದ ಸಾಮಗ್ರಿಗಳನ್ನು ಜನ ಭಕ್ತಿಯಿಂದ ತಂದೊಪ್ಪಿಸುತ್ತಾರೆ. ತಮಗೆ ಮಾನಸಿಕ ನೆಮ್ಮದಿ, ಕಷ್ಟ ಪರಿಹಾರ ಹಾಗೂ ಇಷ್ಟಾರ್ಥ ಸಿದ್ದಿ ಆಗಿರುವುದಾಗಿ ಹಲವರು ಹೇಳುತ್ತಿದ್ದಾರೆ.

ಪೂಜೆ, ಹಣ್ಣು ಕಾಯಿ, ಮಂಗಳಾರತಿಗಳ ಜತೆಗೆ ಗಣಪತಿ ಹೋಮ, ರಂಗಪೂಜೆ, ತುಲಾಭಾರ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಉತ್ಸವದ ದಿನಗಳಲ್ಲಿ ಜರಗುತ್ತವೆ. ಪ್ರಾರಂಭದಲ್ಲಿ ಇಪ್ಪತ್ತೊಂದು ಕಿಲೋ ಅಕ್ಕಿಯ ನೈವೇದ್ಯವನ್ನು ದೇವರಿಗೆ ಅರ್ಪಿಸಿ ಅದನ್ನು ಭಕ್ತರಿಗೆ ಹಂಚಲಾಗುತ್ತಿತ್ತು. ಕ್ರಮೇಣ ಪ್ರಸಾದ ಭೋಜನಕ್ಕೆ ಬರುವವರ ಮತ್ತು ಅದಕ್ಕಾಗಿ ಅಕ್ಕಿ-ದವಸಗಳು, ತೆಂಗಿನಕಾಯಿ, ತರಕಾರಿ ಮುಂತಾದುವುಗಳನ್ನು ಕೊಡುವವರ ಸಂಖ್ಯೆ ಹೆಚ್ಚಿದ್ದರಿಂದ ಪ್ರತಿದಿನವೂ ಅನ್ನ ಸಂತರ್ಪಣೆ ಏರ್ಪಡುತ್ತಿದೆ. ಸಾವಿರಾರು ಮಂದಿ ಭಕ್ತರು ಇದರಲ್ಲಿ ಭಾಗವಹಿಸುತ್ತಾರೆ. ಆಗೊಮ್ಮೆ ಈಗೊಮ್ಮೆ ದಾನಿಗಳು ಅಪೇಕ್ಷೆ ಪಟ್ಟಾಗ ಬಡವರಿಗೆ ದವಸಧಾನ್ಯ, ಬಟ್ಟೆಬರೆಗಳನ್ನು ವಿತರಿಸುವ ಕ್ರಮವೂ ಇದೆ.

ಸಾಂಸ್ಕೃತಿಕ ಕಲಾಪಗಳು :

ಬರಬರುತ್ತಾ ವೈವಿಧ್ಯಮಯ ಬೌದ್ಧಿಕ ಮತ್ತು ಸಾಂಸ್ಕೃತಿಕ ಕಲಾಪಗಳು ಹೆಚ್ಚತೊಡಗಿದುವು. ಉತ್ಸವವು ಮೂರೋ ಐದೋ ದಿನಗಳಿದ್ದಾಗ ಇವುಗಳಿಗೆ ಸಾಕಷ್ಟು ಎಡೆ ಸಿಕ್ಕುತ್ತಿರಲಿಲ್ಲ. ಸಪ್ತಾಹದ ಕಾಲ ನಡೆಯತೊಡಗಿದಾಗ ಕಲಾಪಗಳ ಸಂಖ್ಯೆ ಹಾಗೂ ವೈವಿಧ್ಯ ಅಧಿಕಗೊಂಡವು.

ಧಾರ್ಮಿಕ ವಿಷಯಗಳ ಕುರಿತು ಪರಿಣತರಿಂದ, ಸ್ವಾಮಿಗಳಿಂದ ಭಾಷಣ. ವಿದ್ವಾಂಸರಿಂದ, ಸಾಹಿತಿಗಳಿಂದ ಉಪನ್ಯಾಸ ಮುಂತಾದ ಕಲಾಪಗಳು ನೆರವೇರುತ್ತಿದ್ದು ವಿವಿಧ ರಂಗಗಳಲ್ಲಿ ದುಡಿಯುವ ಹಿರಿಯರನ್ನು ಅತಿಥಿ-ಅಭ್ಯಾಗತರಾಗಿ ಆಹ್ವಾನಿಸಲಾಗುತ್ತಿದೆ. ಪ್ರತಿಭಾವಂತರಾದ ಎಳೆಯರು, ಯುವಜನರು ಮತ್ತು ಹಿರಿಯರನ್ನು ಸಂದರ್ಭೋಚಿತವಾಗಿ ಸನ್ಮಾನಿಸಲಾಗುತ್ತಿದೆ.

ಉತ್ಸವದ ದಿನಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಬಹುಜನರನ್ನು ಆಕರ್ಷಿಸುತ್ತಿವೆ. ಭಜನೆ, ಯಕ್ಷಗಾನ ಬಯಲಾಟ, ಭರತನಾಟ್ಯ, ಜನಪದ ನೃತ್ಯ, ಜಾದೂ ಪ್ರದರ್ಶನ, ಕನ್ನಡ-ತುಳು ನಾಟಕ, ಸ್ಯಾಕ್ರೋಫೋನ್ ವಾದನ, ಶಾಸ್ತ್ರೀಯ ಮತ್ತು ಸುಗಮ ಸಂಗೀತ, ಭಕ್ತಿ ರಸಮಂಜರಿ, ಹರಿಕಥೆ ಮುಂತಾದುವು ಜನಾಕರ್ಷಣೆಗೆ ಸಹಕಾರಿಯಾಗಿವೆ. ಸಾಯಂಕಾಲ ಮಾತ್ರವಲ್ಲದೆ ಬೆಳಗ್ಗಿನ ಹೊತ್ತಿನಲ್ಲೂ ಕಲಾ ಕಾರ್ಯಕ್ರಮಗಳಿಗೆ ಅವಕಾಶ ಸಿಗುತ್ತಿದೆ.

ಇಂತಹ ಕಲಾಪಗಳನ್ನು ಏರ್ಪಡಿಸುವಾಗ ಈಗಾಗಲೇ ಹೆಸರು ಮಾಡಿದ ಹಿರಿಯರ ಕಲಾವಿದರ ಜತೆಗೆ ಉದಯೋನ್ಮುಖ ಪ್ರತಿಭಾಶಾಲಿಗಳನ್ನು, ಪರವೂರಿನ ಪ್ರಸಿದ್ದರೊಂದಿಗೆ ಊರಿನ ಪರಿಚಿತರನ್ನು ವೇದಿಕೆಗೆ ಆಮಂತ್ರಿಸಲಾಗುತ್ತಿದೆ. ಇದರಿಂದಾಗಿ ನೂರಾರು ಮಂದಿ ಕಲಾವಿದರಿಗೆ ತಮ್ಮ ಪ್ರತಿಭಾಪ್ರದರ್ಶನಕ್ಕೆ ಅವಕಾಶ ಸಿಗುತ್ತಿದೆ.

ಶೋಭಾಯಾತ್ರೆ :

ಕೊನೆಯ ದಿನದ ಶೋಭಾಯಾತ್ರೆಯಂತೂ ತುಂಬ ಅದ್ದೂರಿಯಿಂದ ಜರಗುತ್ತಿದೆ. ಅತ್ಯಾಕರ್ಷಕ ಸ್ತಬ್ಧ ಚಿತ್ರಗಳು, ಗೊಂಬೆ ಮತ್ತಿತರ ಕುಣಿತಗಳು, ವಾದ್ಯವೃಂದ ಹಾಗೂ ಸುಡುಮದ್ದು ಪ್ರದರ್ಶನಗಳಿಂದಾಗಿ ಯಾತ್ರೆಯು ಜನರ ಗಮನವನ್ನು ಸೆಳೆಯುತ್ತದೆ. ಪಟ್ಟಣದ ಹೆಚ್ಚಿನ ಭಾಗಗಳಲ್ಲಿ ಶೋಭಾ ಯಾತ್ರೆಯು ಸಂಚರಿಸುವುದರಿಂದ ಆಸಕ್ತರು ರಾತ್ರಿಯ ಹೊತ್ತು ವಿದ್ಯುದ್ದೀಪದ ಬೆಳಕಿನಲ್ಲಿ ಇದರ ವರ್ಣ ವೈಖರಿಯನ್ನು ನೋಡಲು ಅವಕಾಶವಿದೆ.

ಕಿಲ್ಲೆ ಮೈದಾನದಿಂದ ಹೊರಡುವ ಮೆರವಣಿಗೆಯು ಪ್ರಧಾನ ರಸ್ತೆಯ ಮೂಲಕ ದರ್ಬೆಗೆ ಹೋಗಿ ಅಲ್ಲಿಂದ ಶಿವಪೇಟೆ, ತಾಲೂಕು ಕಛೇರಿ ರಸ್ತೆ, ರಾಧಾಕೃಷ್ಣ ಮಂದಿರ ರಸ್ತೆ, ನ್ಯಾಯಾಲಯ ರಸ್ತೆ, ಮುಖ್ಯ ರಸ್ತೆ, ಬೊಳುವಾರು ಮೂಲಕ ಹಾದು ಮಂಜಲ್‌ಪಡ್ಡು ತನಕ ಸಾಗುತ್ತದೆ. ಶ್ವೇತ ಸರೋವರವು ರೈಲ್ವೇ ನಿರ್ಮಾಣದ ವೇಳೆ ಮುಚ್ಚಿಹೋದದ್ದರಿಂದ ಕೆರೆಯೊಂದರಲ್ಲಿ ಗಣೇಶ ವಿಗ್ರಹದ ಜಲಸ್ತಂಭನ ನೆರವೇರುತ್ತದೆ.

ಶೋಭಾಯಾತ್ರೆಯ ಕಳೆಯನ್ನು ಹೆಚ್ಚಿಸುವ ಸಂಗತಿಯೆಂದರೆ ದೈವಗಳ ಪಾಲ್ಗೊಳ್ಳುವಿಕೆ. ಮುಖ್ಯವಾಗಿ ಎರಡು ದೈವಗಳು ಜನರ ಗಮನ ಸೆಳೆಯುತ್ತವೆ. ರಕೇಶ್ವರಿ ಭೂತವು ಪೂಜಾ ಸ್ಥಳದಲ್ಲಿ ಕಟ್ಟಲ್ಪಟ್ಟು ಜಲಸ್ತಂಭನದ ಕೆರೆಯ ತನಕ ಬರುತ್ತದೆ. ಅಣ್ಣಪ್ಪ ಪಂಜುರ್ಲಿ ಭೂತವು ಕಲ್ಲೇಗದ ದೈವದ ಬನದಿಂದ ಹೊರಟು ವಿಸರ್ಜನ ಸ್ಥಳದ ತನಕ ಬರುವುದು. ಶೋಭಾಯಾತ್ರೆಯ ವೇಳೆ ಕಲ್ಲೇಗದ ಕಲ್ಲುರ್ಟಿ-ಕಲ್ಕುಡ ದೈವಗಳಿಗೆ ತಂಬಿಲ ನೆರವೇರುತ್ತದೆ. ಮಾಡಾವಿನ ರಾಮ ಪರವ ಮತ್ತು ಮಕ್ಕಳು ಪಾತ್ರಿಗಳಾಗಿ ಸಹಕರಿಸುತ್ತಿದ್ದಾರೆ.

ಶ್ರೀ ದೇವತಾ ಸಮಿತಿ :

ಶ್ರೀ ಗಣೇಶೋತ್ಸವವು ಪ್ರಾರಂಭದ ಕಾಲಾವಧಿಯಲ್ಲಿ ಹನುಮಂತ ಮಲ್ಯರ ಮಾರ್ಗದರ್ಶನ ಹಾಗೂ ಅನೌಪಚಾರಿಕ ಸಮಿತಿಯೊಂದರ ನೆರವಿನಿಂದ ನೆರವೇರುತ್ತಿತ್ತು. ಖರ್ಚು ವೆಚ್ಚಗಳನ್ನು ನಿಭಾಯಿಸುವುದಕ್ಕಾಗಿ ಸದಸ್ಯರು ಪುತ್ತೂರು ಮಾತ್ರವಲ್ಲದೆ ಸುಳ್ಯ, ಬೆಳ್ತಂಗಡಿ, ಕಡಬ, ವಿಟ್ಲ, ನೇರಳೆಕಟ್ಟೆ, ಕಲ್ಲಡ್ಕ, ಬಿ. ಸಿ. ರೋಡ್, ಉಪ್ಪಿನಂಗಡಿ ಮುಂತಾದ ಊರುಗಳಿಗೆ ಹೋಗಿ ಭಕ್ತ ಜನರರಿಂದ ಹಣ ಸಂಗ್ರಹಿಸುತ್ತಿದ್ದರು. ಸಂಪನ್ಮೂಲವನ್ನು ಹೊಂದಿಸಿಕೊಳ್ಳುವುದು ಕಷ್ಟವಾದ್ದರಿಂದ ಕನಿಷ್ಠ ಖರ್ಚಿನಲ್ಲಿ ಉತ್ಸವ ಪೂರ್ತಿಗೊಳಿಸುವ ಪ್ರಯತ್ನ ನಡೆದಿತ್ತು.

ಆದರೆ ರಾಜಕೀಯ ಮುಂದಾಳು ಹಾಗೂ ಸಾಮಾಜಿಕ ಕಾರ್ಯಕರ್ತ ಎನ್. ಸುಧಾಕರ ಶೆಟ್ಟಿಯವರು ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ಮೇಲೆ ಶ್ರೀ ದೇವತಾ ಸಮಿತಿಗೆ ಸ್ಪಷ್ಟವಾದ ಸ್ವರೂಪವನ್ನು ನೀಡಿದರು. ಸುಧಾರಣೆಗಳನ್ನು ತಂದರು. ವಂತಿಗೆ ಸಂಗ್ರಹಿಸಲು ಬೇರೆ ಊರುಗಳಿಗೆ ಹೋಗದೆ ಸ್ಥಳೀಯರಿಂದಲೇ ದೇಣಿಗೆ ಹೊಂದಿಸಿಕೊಂಡು ಕಲಾಪಗಳನ್ನು ನಡೆಸುವ ಏರ್ಪಾಡು ಮಾಡಿದರು. ಕ್ರಮಬದ್ಧವಾದ ಪೂರ್ವಸಿದ್ದತೆ, ಅಗತ್ಯ ಪಟ್ಟವರಿಗೆಲ್ಲ ಆಮಂತ್ರಣ ರವಾನೆ, ಸೂಕ್ತವಾದ ಪ್ರಚಾರ ಜವಾಬ್ದಾರಿಗಳ ವಿಭಜನೆ, ಸಂಘಟನಾ ಚಾತುರ್ಯ ಮುಂತಾದುವುಗಳಿಂದಾಗಿ ಸಮಿತಿಗೆ ವಿಶ್ವಾಸಾರ್ಹತೆ ಮೂಡಿತು.

ಚೌತಿ ಸಮಯದಲ್ಲಿ ಮಳೆ ಬರುವುದರಿಂದ ಪ್ರತಿ ವರ್ಷ ಹೆಚ್ಚುತ್ತಿರುವ ಭಕ್ತ ಜನರಿಗೆ ಸೂಕ್ತ ಸ್ಥಳಾವಕಾಶ ಒದಗಿಸುವುದು ಅಗತ್ಯವಾದ್ದರಿಂದ ಹಿಂದೆ ಹಾಕಲಾಗುತ್ತಿದ್ದ ಟರ್ಪಾಲಿನ್ ಚಪ್ಪರದ ಬದಲು ಗಟ್ಟಿಮುಟ್ಟಾದ ಝೀಂಕ್ ಶೀಟ್ ನ ಪ್ರಯೋಗ ಮಾಡಿದರು. ಮಳೆ ಗಾಳಿಗೆ ಅಲುಗಾಡದ ಈ ತಾತ್ಕಾಲಿಕ ಮಾಡಿನ ನಿರ್ಮಾಣದಿಂದಾಗಿ ತೊಂದರೆ ಕಡಿಮೆಯಾಯಿತು. ಚಪ್ಪರಕ್ಕೂ ನೋಟ ಬಂತು. ಸಾಂಸ್ಕೃತಿಕ ಕಲಾಪಗಳಿಗೆ ಬರುವ ಪ್ರೇಕ್ಷಕರಿಗೆ ಸಮಾಧಾನವಾಯಿತು.

ನಾಗರ ಪಂಚಮಿ ದಿನ ಮೂರ್ತಿ ನಿರ್ಮಾಣದ ಮುಹೂರ್ತ, ಎರಡು ದಿನಗಳ ಬಳಿಕ ಚಪ್ಪರ ಮುಹೂರ್ತ, ಚೌತಿಯಂದು ವಿಗ್ರಹ ಪ್ರತಿಷ್ಠಾಪನೆ, ಏಳು ದಿನಗಳ ಕಾಲ ಬೆಳಿಗ್ಗೆ ಪೂಜೆ, ಮಧ್ಯಾಹ್ನ ಗಣಹೋಮ, ನೈವೇದ್ಯ ವಿತರಣೆ, ರಾತ್ರಿ ರಂಗಪೂಜೆ ಇತ್ಯಾದಿಗಳನ್ನು ನಿಯಮ ಬದ್ದಗೊಳಿಸಿದ್ದರಿಂದ ಸೇವೆ ಮಾಡಿಸುವವರಿಗೆ ಅನುಕೂಲವಾಯಿತು. ಸೋಮವಾರ ಪಕ್ಕದಲ್ಲೇ ಸಂತೆ ಇರುವುದರಿಂದ ತರಕಾರಿ ಮಾರಲುಕೊಳ್ಳಲು ಬರುವವರಿಗೆಲ್ಲ ಗಣೇಶನ ದರ್ಶನ ಸುಲಭವಾಯಿತು.

ಬೆಳ್ಳಿಹಬ್ಬ :

1982ರಲ್ಲಿ ಶ್ರೀ ದೇವತಾ ಸಮಿತಿಯ ವತಿಯಿಂದ ನಡೆಯುವ ಶ್ರೀ ಗಣೇಶೋತ್ಸವದ ಬೆಳ್ಳಿ ಹಬ್ಬ ವಿಜೃಂಭಣೆಯಿಂದ ನೆರವೇರಿತು. ಆಸ್ತಿಕರ ಅಪೇಕ್ಷೆಯಂತೆ ಇಪ್ಪತೈದು ದಿವಸಗಳ ಕಾಲ ಗಣಪತಿಯ ಪೂಜೆ ಕೈಂಕರ್ಯಾದಿಗಳು ನೆರವೇರಿದುವು. ಆ ಸಂದರ್ಭದಲ್ಲಿ ಸುಧಾಕರ ಶೆಟ್ಟಿ ಅಧ್ಯಕ್ಷರಾಗಿದ್ದು ಎಂ. ಚಂದ್ರಶೇಖರ ಗೌಡ ಮತ್ತು ಡಿ. ಕೆ. ಹೆಬ್ಬಾರ್ (ಉಪಾಧ್ಯಕ್ಷರು) ಶಾಂತಾರಾಮ (ಕಾರ್ಯದರ್ಶಿ) ಮುಂತಾದವರು ಪದಾಧಿಕಾರಿಗಳಾಗಿದ್ದರು.

ರಜತೋತ್ಸವದ ಅಂಗವಾಗಿ ತಪಸ್ವಿ ಕಾಸರಗೋಡು ಸಂಪಾದಕತ್ವದಲ್ಲಿ ಒಂದು ಸ್ಮರಣಸಂಚಿಕೆಯನ್ನು ಹೊರತರಲಾಯಿತು. ಇದರಲ್ಲಿ ಸರ್ವಧರ್ಮ ಸಮನ್ವಯದ ಮಹತ್ತ್ವ ಹಾಗೂ ಆವಶ್ಯಕತೆ ಕುರಿತು ಹಲವು ಲೇಖನಗಳು ಪ್ರಕಟವಾಗಿವೆ.

“ಸಮರ್ಥರು ಚೌತಿ ಗಣೇಶನಿಗೆ ಹಲವಾರು ಭಕ್ಷ್ಯಗಳನ್ನು ಸಮರ್ಪಿಸಿ ಪ್ರಸಾದ ರೂಪದಲ್ಲಿ ಅವನ್ನು ಭುಂಜಿಸಿ ಆನಂದಪಡುತ್ತಾರೆ. ಆದರೆ ಅಸಮರ್ಥರಾದವರಿಗೆ ಇದು ಅಸಾಧ್ಯ. ಆರ್ಥಿಕವಾಗಿ ಹಿಂದಿರುವಾಗ ವಿಜೃಂಭಣೆಯ ಚೌತಿ ಕಷ್ಟ ಅಂದುಕೊಳ್ಳುತ್ತಾರೆ, ನೊಂದುಕೊಳ್ಳುತ್ತಾರೆ. ಸಾರ್ವಜನಿಕ ಗಣೇಶೋತ್ಸವವೇ ಇದಕ್ಕೆ ಪರಿಹಾರ. ಸಾಮೂಹಿಕ ಪ್ರಾರ್ಥನೆ, ಸೌಹಾರ್ದಗಳಿಗೆ ಇಲ್ಲಿ ಅವಕಾಶವಿದೆ.” ಎಂದು ಸಮಿತಿಯ ವಕ್ತಾರರು ಅಂದು ಹೇಳಿರುವುದು ಸಮಂಜಸವಾಗಿದೆ. ಅಲ್ಲದೆ ದೈವಿಕ ಆರಾಧನೆಯೊಂದಿಗೆ ಭೂತರಾಧನೆ ಯುಕ್ತವೇ. ಉತ್ಸವಗಳಲ್ಲಿ ವಿಜೃಂಭಣೆ ಯಾಕೆ ? ಮುಂತಾದ ಪ್ರಶ್ನೆಗಳಿಗೆ ದೇವತಾ ಸಮಿತಿಯವರು ಉತ್ತರ ಕೊಟ್ಟಿದ್ದಾರೆ. (ಸಮಿತಿಯೊಡನೆ ಪ್ರಶ್ನೆ – ಬೆಳ್ಳಿಹಬ್ಬ ಸ್ಮರಣ ಸಂಚಿಕೆ).

ಇಂದು ಮುಂದು :

ಸ್ವರ್ಣೋತ್ಸವದ ಸಡಗರ – ಸಂಭ್ರಮಗಳಿಗೆ ಅಣಿಯಾಗಿರುವ ಶ್ರೀ ದೇವತಾ ಸಮಿತಿಯು ಈಗಾಗಲೇ ಪುತ್ತೂರಿನ ಜನಮಾನಸದಲ್ಲಿ ತನ್ನ ಹೆಜ್ಜೆಗುರುತುಗಳನ್ನು ಒತ್ತಿದೆ. ಗಣೇಶನಿಗೆ ಪ್ರಿಯವಾದ ಹಲವು ಧಾರ್ಮಿಕ ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ.

ಆತ್ಮಚಿಂತನೆಗೆ ಇದು ಸಕಲ. ಕಳೆದ ಐದು ದಶಕಗಳಲ್ಲಿ ಸಮಿತಿಯು ನಡೆದುಬಂದ ದಾರಿಯೆಡೆಗೆ ಕಣ್ಣು ಹಾಯಿಸುವುದು ಮತ್ತು ಲೋಪದೋಷಗಳನ್ನು ಸರಿಪಡಿಸಿಕೊಂಡು ಋಜುಮಾರ್ಗದಲ್ಲಿ ಮುಂದೆ ಸಾಗುವುದು ಸಮಿತಿಯ ಆದ್ಯ ಕರ್ತವ್ಯ.

ಉತ್ಸಾಹೀ ಕಾರ್ಯಕರ್ತ ಸುಧಾಕರ ಶೆಟ್ಟಿಯವರು ಮತ್ತು ಅವರೊಂದಿಗೆ ಹಲವಾರು ವರ್ಷಗಳಿಂದ ದುಡಿಯುತ್ತಿರುವ ಸಂಗಡಿಗರು ಜ್ಯೋತಿಷ್ಯಗಳ ಅಭಿಪ್ರಾಯ ತಿಳಿದುಕೊಂಡು ಪುತ್ತೂರಲ್ಲೊಂದು ಗಣೇಶ ಮಂದಿರ ನಿರ್ಮಿಸಲು ಉದ್ದೇಶಿಸಿದ್ದಾರೆ. ತುಂಬ ಯೋಚಿಸಿ ಮುಂದಡಿಯಿಡಬೇಕಾದ ಯೋಜನೆ ಇದು. ಏಕೆಂದರೆ ಚೌತಿಯ ಗಣಪನ ಉತ್ಸವವು ನಾಲ್ಕಾರು ದಿನ ನಡೆದು ವಿಗ್ರಹದ ಜಲಸ್ತಂಭನದೊಂದಿಗೆ ಮುಗಿಯುತ್ತದೆ. ಆದರೆ ಮಂದಿರದ ವಿಷಯ ಹಾಗಲ್ಲ. ಅದೊಂದು ಶಾಶ್ವತ ರಚನೆ. ಹಾಗಾಗಿ ಅದರ ನಿವೇಶನ, ಸ್ವರೂಪ, ನಿರ್ವಹಣೆ ಮುಂತಾದುವುಗಳ ಕುರಿತು ಸಮರ್ಪಕವಾದ ಚಿಂತನೆ ಅವಶ್ಯ.

ಜೇನಹನಿ :

ಉತ್ಸವಕೆ ಇತಿಹಾಸವರ್ಧ ಶತಮಾನ
ವಿಶ್ಲೇಷಿಸಲು ಬೇಕು ಸಾಧನೆಯಮಾನ
ಆತ್ಮ ಚಿಂತನೆಯಿಂದ ಲೋಪಗಳ ತಿದ್ದಿ
ಮುನ್ನಡೆಯೇ ಗಣಪತಿಯು ಕೊಡಲಿ ಸದ್ಭುದ್ಧಿ