34 ವರ್ಷಗಳಿಂದ ಕಿಲ್ಲೆ ಮೈದಾನ ಗಣಪತಿ ಮೂರ್ತಿ ರಚಿಸುತ್ತಿರುವ ರಮೇಶ್ ಪೂಜಾರಿ.
ಅದು 1988 ರ ಸಮಯ. ಡಾ ಹನುಮಂತ ಮಲ್ಯರವರು ಕೋರ್ಟ್ ರೋಡ್ ಗಣಪತಿ ಎಂದೇ ಪ್ರಸಿದ್ದವಾಗಿರುವ ಗಣೇಶೋತ್ಸವ ಸಮಿತಿಯ ಅಧ್ಯಕ್ಷರು. ಆ ವರ್ಷ ಗಣೇಶೋತ್ಸವಕ್ಕೆ ಗಣಪತಿ ಮೂರ್ತಿ ರಚಿಸಲು ಕಲಾವಿದರು ಲಭಿಸಲಿಲ್ಲ; ಪ್ರಸಿದ್ದರಿಗೆ ಮೂರ್ತಿ ರಚನೆಯನ್ನು ನೀಡಲು ಹಣಕಾಸಿನ ಸಮಸ್ಯೆಯೂ ಇತ್ತು ಆ ಸಂದರ್ಭದಲ್ಲಿ 27 ವರ್ಷದ ರಮೇಶ್ ಪೂಜಾರಿಯವರು ಮಲ್ಯರಿಗೆ ಕಂಡರು. ‘ನಾನು ಹೇಳುತ್ತೇನೆ, ನೀನು ಮಾಡು ‘ ಎಂಬ ಆದೇಶ. ಸಂದರ್ಭವನ್ನು ಸವಾಲಾಗಿ ಸ್ವೀಕರಿಸುವ
ತರುಣನಾದ ರಮೇಶ್ ಪೂಜಾರಿಯವರು ಕಾರ್ಯವನ್ನು ಕೈಗೆತ್ತಿಕೊಂಡರು. ಮಲ್ಯರವರ ನಿರ್ದೇಶನದಂತೆ ರಚನೆ ಮುಂದುವರಿದು , ಮೂರ್ತಿ ಸಿದ್ದವಾಯಿತು. ಆ ವರ್ಷದ ಗಣೇಶೋತ್ಸವ ಕಳೆದು ಮುಂದಿನ ಉತ್ಸವದ ಮೊದಲು ಮಲ್ಯರು ದೈವಾಧೀನರಾಗುತ್ತಾರೆ.ಮುಂದೆ ನೆಲ್ಲಿಕಟ್ಡೆ ಸುಧಾಕರ ಶೆಟ್ಟಿಯವರು ದೇವತಾ ಸಮಿತಿಯ ಅಧ್ಯಕ್ಷರಾಗಿ ಮುಂದುವರಿದರು. ಒಂದು ವರ್ಷ ಬಿಟ್ಟು ಮುಂದೆ ನಿರಂತರವಾಗಿ ರಮೇಶ್ ಪೂಜಾರಿಯವರೇ ಮೂರ್ತಿಯನ್ನು ರಚಿಸುತ್ತಿದ್ದಾರೆ. ನಾಗರ ಪಂಚಮಿಯ ದಿನ ಮೂರ್ತಿ ರಚನೆಗೆ ಆರಂಭಿಸುತ್ತಾರೆ. ಒಂದು ತಿಂಗಳ ಕಾಲಾವಧಿ ಲಭಿಸಿದರೆ , ಮಣ್ಣಿನ ಮೂರ್ತಿ ಸರಿಯಾಗಿ ಒಣಗಿ ಸಿದ್ದಗೊಳ್ಳುತ್ತದೆ: ಇಲ್ಲವಾದರೆ ಹಸಿಯಾಗಿ ಇರುತ್ತದೆ.
ಈ ಮೂರ್ತಿ ರಚನೆ ಆರಂಭಿಸಿದ ಬಳಿಕ, ಇತರೆಡೆಯ ಕನಿಷ್ಟ 25 ಮೂರ್ತಿಗಳನ್ನು ರಚಿಸುತ್ತಿದ್ದರು. ಈಗ ಎಲ್ಲವನ್ನೂ ಇತರರಿಗೆ ಒಪ್ಪಿಸಿ ಕೇವಲ ಒಂದು ಗಣಪತಿ ಮೂರ್ತಿಯನ್ನು ರಚಿಸುತ್ತಿದ್ದಾರೆ. ಇತರ ಗಣಪತಿ ಮೂರ್ತಿಗಿಂತ ಕಿಲ್ಲೆ ಮೈದಾನ ಗಣಪತಿ ಪ್ರತ್ಯೇಕವಾಗಿದೆ ಎಂದು ಹೇಳುವ ರಮೇಶ್ ಪೂಜಾರಿಯವರು, ಈ ಗಣಪತಿ ಮೂರ್ತಿಯನ್ನು ಮರದ ಹಲಗೆ ಬಳಸದೆ ನೇರವಾಗಿ ಬೆಳ್ಳಿ ಪೀಠದ ಮೇಲೆ ರಚಿಸಲಾಗುತ್ತಿದೆ. ಕೇವಲ ರಚನೆ ಮಾತ್ರವಲ್ಲದೆ , ಮೂರ್ತಿ ಸ್ಥಾಪನೆಯಾದ ಬಳಿಕ ವಿಸರ್ಜನೆಯವರೆಗೆ ರಾತ್ರಿಕಾಲದಲ್ಲಿ ಉತ್ಸವ ಸ್ಥಳ ದಲ್ಲಿ ಇರುತ್ತಾರೆ ರಮೇಶ್ ಪೂಜಾರಿಯವರು. ಕಲೆಯ ಬಗೆಗೆ ಯಾವುದೇ ಹಿನ್ನೆಲೆ ಇಲ್ಲದೆ , ಗಣೇಶ ಮೂರ್ತಿ ರಚನೆಕಾರನಾದುದು ವಿಶೇಷವೇ ಸರಿ.
ಡಾ। ರಾಜೇಶ್ ಬೆಜ್ಜಂಗಳ
Leave a Reply