॥ ಶ್ರೀ ಮಹಾಲಿಂಗೇಶ್ವರಾಯ ನಮಃ ॥
॥ ಶ್ರೀ ಮಹಾಗಣಪತಯೇ ನಮಃ ||
ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭಾ।
ನಿರ್ವಿಘ್ನಂ ಕುರುಮೇ ದೇವ ಸರ್ವಕಾರ್ಯೇಷು ಸರ್ವದಾ||

ಭಾರತ ದೇಶದಲ್ಲಿ ಆಚರಣೆಯಲ್ಲಿರುವ ಶಿವರಾತ್ರಿ, ಕೃಷ್ಣಾಷ್ಠಮಿ, ಏಕಾದಶಿ, ಸತ್ಯನಾರಾಯಣ ವೃತ, ಷಷ್ಠಿ ವೃತ, ಶನಿ ವೃತ, ರಾಘವೇಂದ್ರ ವೃತ, ಸೋಮವಾರ ವೃತ, ಗಣೇಶನ ವೃತ, ಗೌರಿ ವೃತ ಇತ್ಯಾದಿ. ಅನೇಕ ಧಾರ್ಮಿಕ ಆಚರಣೆ ಪೂಜಾದಿಗಳೇ ಭಾರತೀಯ ಸಂಸ್ಕೃತಿಗೆ ಅಡಿಗಲ್ಲಾಗಿದೆ. ಎಲ್ಲರೂ ಜತೆಗೂಡಿ ಮಾಡುವ ಸಂತೋಷದ ಆಚರಣೆಯಿಂದ ಸಂಘಟನೆ, ಮನಸ್ಸಿಗೆ ನೆಮ್ಮದಿ, ಶಾಂತಿ ನೀಡುವ ಈ ಧಾರ್ಮಿಕ ಕಾರ್ಯಗಳು ಹಬ್ಬವೆನಿಸಿವೆ. ಭಾದ್ರಪದ ಮಾಸದ ಚತುರ್ಥಿ ದಿನ ಗಣೇಶ ಚತುರ್ಥಿ ಆಚರಣೆ ಬಹಳ ಶ್ರೇಷ್ಠ. ಯಾವುದೇ ವ್ರತ, ಪೂಜೆ, ಆಚರಣೆ ಮಾಡಬೇಕಾದರೆ ಅವುಗಳ ಮಹತ್ವ, ಅರ್ಥಜ್ಞಾನವಿದ್ದು ಮಾಡಿದರೆ ಬಹಳ ಫಲ ಎಂದು ಶಾಸ್ತ್ರ ಪ್ರಕಾರರ ಅಭಿಮತ. ಗಣಪತಿ ಎಂದರೆ ಗಣಾನಾಂ ಪತಿಃ, ಗಣಗಳ ಒಡೆಯ, ಗಣಗಳೆಂದರೆ ಅಷ್ಟ ವಸುಗಳ ಸಮೂಹ, ಅಂದರೆ ದಿಗ್ದೇವತೆಗಳು ಪತಿಃ ಎಂದರೆ ರಾಜ, ಒಡೆಯ ಎಂದರ್ಥ. ಅಗ್ನಯೇ ಸ್ವಾಹಾ, ಇಂದ್ರಾಯ ಸ್ವಾಹಾ ಎಂದು ಅಗ್ನಿಯಲ್ಲಿ ಆಹುತಿ ಕೊಡುವಾಗ ಅಗ್ನಿ, ಇಂದ್ರರು ಗಣಪತಿಯ ಒಪ್ಪಿಗೆ ಇಲ್ಲದೆ ಆಹುತಿ ಸ್ವೀಕಾರ ಮಾಡಲಾರರು. ಆದ್ದರಿಂದಲೇ ಗಣಪತಿಗೆ ಅಗ್ರಪೂಜೆಯನ್ನು ಕೊಟ್ಟು ಯಜ್ಞಗಳನ್ನು ಪ್ರಾರಂಭಿಸುವರು. ಎಲ್ಲಾ ಮಂಗಲ ಕಾರ್ಯವನ್ನು ಮಾಡುವಾಗಲೂ ಗಣಪತಿ ಹವನವನ್ನು ಮಾಡಿ ವಿವಾಹಾದಿ ಶುಭಕಾರ್ಯವನ್ನು ಮಾಡುವರು. “ಪ್ರತಿ ಪರ್ವ ರಸ್ತೋದಯ” ಅನುಕೂಲವಿದೆ ಎಂದೆನಿಸಿದಾಗ ಹಬ್ಬವು ಒದಗಿ ಬರುವುದಿಲ್ಲ. ಕಾಲ, ಸಂಧಿ, ಋತು ಮಾಸವನ್ನು ಕಾಯಬೇಕು. ಈ ಭಾರತವು ಹಬ್ಬಗಳು ತುಂಬಿದ ನಾಡು. ಪ್ರತೀ ಭಾರತೀಯ ಪ್ರಜೆಯು ಆಚರಿಸಬೇಕಾದ ಪ್ರಮುಖ ಹಬ್ಬಗಳೆಂದರೆ ಯುಗಾದಿ, ರಾಮನವಮಿ, ಕೃಷ್ಣಾಷ್ಟಮಿ, ಗಣೇಶ ಚತುರ್ಥಿ, ದಸರಾ, ದೀಪಾವಳಿ, ಶಿವರಾತ್ರಿ ಇತ್ಯಾದಿ ನಾಗರ ಪಂಚಮಿಯಿಂದ ಹಿಡಿದು ದೀಪಾವಳಿವರೆಗೆ ಹಬ್ಬಗಳ ದೀರ್ಘ ಋತು ಎಂದು ಹೇಳಬಹುದು. ಮನೆಯಲ್ಲಿ ಕುಳಿತು ಬೇಡವಾದ ಹರಟೆ ಹೊಡೆಯುವುದು, ತಿಂಡಿ ತಿನಿಸುಗಳಲ್ಲೇ ಕಾಲ ಕಳೆಯುವುದು, ವಿನೋದ, ಆಟ, ಸನ್ಮಾನ ಈ ಎಲ್ಲಾ ಜೀವನ ಜಂಜಾಟದಿಂದ ಮನಸ್ಸನ್ನು ನಿರಂತರ ಬಂಧಿಸಿಡುತ್ತವೆ. ಮನಸ್ಸಿನ ನೆಮ್ಮದಿ, ಶಾಂತಿಗೋಸ್ಕರ ಯೋಗ್ಯ ಮೂರ್ತಿದರ್ಶನ, ದೇವಸ್ಥಾನ, ಧ್ಯಾನ ಇತ್ಯಾದಿಗಳಿಂದ ಸ್ವಚ್ಛ ಶಾಂತಿಯುತ ಪವಿತ್ರ ವಾತಾವರಣ ಬೇಕಾಗುತ್ತದೆ. ಅಂತಹ ಮಹಾಗಣಪತಿಯ ಮೂರ್ತಿಯನ್ನು ಕಂಡೊಡನೆ ಮನಸ್ಸಿನ ಕಳವಳ, ಸಂದೇಹ ಎಲ್ಲಾ ಕರ್ಮಗಳ ಜಂಜಡವು ನಾಶವಾಗುತ್ತದೆ. ಗಣಪತಿಗೆ ಕೆಂಪು ಹೂ, ಕೆಂಪು ವಸ್ತ್ರ, ರಕ್ತ ಚಂದನ, ಮೋದಕ ಇಪ್ಪತ್ತೊಂದು, ಇಪ್ಪತ್ತೊಂದು ದೂರ್ವಾ ಅರ್ಪಿಸಿ ಭಕ್ತಿಯಿಂದ ಪ್ರಾರ್ಥಿಸಿ ಕೊಳ್ಳಬೇಕು
ಶುಕ್ಲ ಪಕ್ಷದ ಚೌತಿಯನ್ನು ವಿನಾಯತಿ ಎಂದು ಕೃಷ್ಣ ಪಕ್ಷದ ಚೌತಿಯನ್ನು ಸಂಕಷ್ಟ, ಚೌತಿ ಎನ್ನುವರು. ತಂತ್ರ ಕೃತಿ ಪೂರ್ತಿ ಉಪವಾಸವಿರಬೇಕು. ನೀರಾಹಾರಿಯಾಗಿರಬೇಕು. ಸಂಜೆ ಪುನಃ ಸ್ನಾನ ಮಾಡಿ ಗಣಪ ಪೂಜೆಗೆ ಸಿದ್ದಪಡಿಸಿ ರಾತ್ರಿ ಚಂದ್ರ ದರ್ಶನವಾದ ಮೇಲೆ ಪೂಜಿಸಿ ನೈವೇದ್ಯ ಮಾಡಿ, ಅರ್ಘ್ಯ ಕೊಟ್ಟು ನಮಸ್ಕಾರ ಮಾಡಿ ನಂತರ ಬೋಜನ ಮಾಡಬೇಕು. ಸಂಕಷ್ಟ ಎಂದರೆ ಸಂಕಟ, ಎಲ್ಲಾ ರೀತಿಯ ಕಷ್ಟ, ಸಂಕಟವನ್ನು ಪರಿಹಾರ ಮಾಡುವ ವಿಘ್ನ ಗಣೇಶ ಚತುರ್ಥಿಯ ದಿನ ಯಾರೂ ಚಂದ್ರನನ್ನು ನೋಡಬಾರದು. ಸಂಕಷ್ಟ ಚೌತಿಯ ದಿನ ಚಂದ್ರನನ್ನು ನೋಡದ ಆಹಾರ ಸೇವಿಸಬಾರದು. ಮಂಗಳವಾರ ಬರುವ ಚೌತಿಯನ್ನು ಅಂಗಾರಕಿ ಎನ್ನುತ್ತಾರೆ. ಅಂಗಾರ ಎಂದರೆ ಮಂಗಳ ಗ್ರಹ, ಈ ಗ್ರಹದ ಮೇಲೆ ಗಣಪತಿಯ ವಿಶೇಷ ಪ್ರಭಾವವಿರುವುದರಿಂದ ಅಂಗಾರಕ ದೋಷವಿರುವ ಪ್ರತಿಯೊಬ್ಬರೂ ಇದನ್ನು ಆಚರಿಸಿದರೆ ಶ್ರೇಯಸ್ಕರ, ಮಂಗಳವಾರ ಬರುವ ಚೌತಿಯನ್ನು ಆಚರಣೆ ಮಾಡಿದರೆ ಇಡೀ ವರ್ಷ ಮಾಡಿದ ಶುಕ್ಲಪಕ್ಷದ ಚೌತಿ ಮತ್ತು ಸಂಕಷ್ಟ ಚೌತಿ ಆಚರಣೆಯ ಫಲವನ್ನು ಗಣಪತಿ ಅನುಗ್ರಹಿಸುವನು ಎಂದು ಶಾಸ್ತ್ರ, ಸುಮುಖ, ಏಕದಂತ, ಕಪಿಲ, ಗಜಕರ್ಣಕ, ಲಂಬೋಧರ, ವಿಕಟ, ವಿಘ್ನರಾಜ, ಗಣಾಧಿಪ, ಧೂಮಕೇತು, ಫಾಲಚಂದ್ರ, ಗಜಾನನ, ಸಿದ್ಧಿ ವಿನಾಯಕ, ಕ್ಷಿಪ್ರ ಪ್ರಸಾದ ಇತ್ಯಾದಿ ಅನೇಕ ಹೆಸರಿನಿಂದ ಅರ್ಚಿಸಬೇಕು.
ಗಣಪತಿಗೆ ನಡೆಯುವ ಸೇವೆಗಳಲ್ಲಿ ಬಹಳ ಫಲಪ್ರದಾಯಕ ಸೇವೆ ಎಂದರೆ ಮೂಡಪ್ಪ ಸೇವೆ. ಗಣಪತಿಗೆ ವಿಶೇಷ ಪೂಜೆ ನೆರವೇರಿಸಿ ಮಹಾಗಣಪತಿಯ ವಿಗ್ರಹದ ಸುತ್ತ ಕಬ್ಬಿನ ಬೇಲಿಯನ್ನು ರಚಿಸಿ ಅದರೊಳಗೆ ಹದಿನಾರು ಮುಡಿ ಅಕ್ಕಿಯ ಅಪೂಪವನ್ನು, ಒಂದು ಮುಡಿ ಅಕ್ಕಿಯ ಪಚ್ಚಪ್ಪವನ್ನು ನೂರ ಎಂಟು ತೆಂಗಿನಕಾಯಿಯ ಅಷ್ಟ ದ್ರವ್ಯವನ್ನು ತುಂಬಲಾಗುವುದು. ನಡು ನಡುವೆ ಜೇನು ತುಪ್ಪ, ಕಲ್ಲು ಸಕ್ಕರೆ, ಒಣ ದ್ರಾಕ್ಷಿ, ತುಪ್ಪವನ್ನು ಬಳಸಲಾಗುವುದು. ವಿಗ್ರಹದ ಜಿಹ್ವಾಗ್ರದವರೆಗೆ ಆವರಿಸಿರಬೇಕು. ಫಲಪುಷ್ಪಗಳಿಂದ ಅಲಂಕರಿಸಿ ಪೂಜಿಸಿ ಪ್ರಾರ್ಥಿಸಿ ಕವಾಟ ಬಂಧನ ಮಾಡಲಾಗುವುದು. ಮರುದಿನ ಪೂರಾಹ್ನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿ ಲೋಕಕ್ಕೆ ಕಲ್ಯಾಣವಾಗಲಿ, ಎಲ್ಲರು ಕ್ಷೇಮದಿಂದಿರಲಿ, ವಿದ್ಯಾ, ಬುದ್ಧಿ, ಸನ್ಮಂಗಲ ಉಂಟಾಗಿ ಸುಭಿಕ್ಷೆ ಉಂಟಾಗಲಿ ಎಂದು ಪ್ರಾರ್ಥಿಸಬೇಕು. ವೇದಘೋಷ, ಮಂಗಲಾಷ್ಟಕ, ವಾದ್ಯ ಘೋಷಗಳೊಂದಿಗೆ ಕವಾಟೋದ್ಘಾಟನೆ ಮಾಡಬೇಕು. ಅಪೂಪ ಪರ್ವದಿಂದ ಇಳಿದು ಬಂದಂತೆ ತೋರುವ ಮಹಾಗಣಪತಿಯ ದರ್ಶನವು ಜೀವನದ ಒಂದು ಮಹಾ ಭಾಗ್ಯ, ಯೋಗ. ಎಲ್ಲಾ ಭಕ್ತರು ಭಕ್ತಿ ಪರವಶರಾಗಿ ನೋಡುವ ಈ ಕಾಲ ಬಹಳ ಪುಣ್ಯ ಕಾಲ, ನಂತರ ಎಲ್ಲಾ ಭಕ್ತರು ಅಪೂಪಾದಿ ನೈವೇದ್ಯಗಳನ್ನು ಪ್ರಸಾದ ಎಂದು ತೆಗೆದುಕೊಳ್ಳಬೇಕು. ಗಜಮುಖನು, ಮಹಾಕಾಯನು, ಲಂಬೋಧರನೂ ಆದ ಗಣಪತಿಯು ಬಹಳ ಚಿಕ್ಕದಾದ ಇಲಿಯನ್ನು ವಾಹನವನ್ನಾಗಿಸಿ ತನ್ನ ಮಹಿಮೆಯನ್ನು ತೋರಿದಂತೆ ಹಿರಿಯರ ಮುಂದೆ ಕಿರಿಯರು ಹೇಗಿರಬೇಕು ಎಂಬುವುದನ್ನು ಲೋಕಕ್ಕೆ ತಿಳಿಸುವಂತೆ ಅಗ್ರಪೂಜೆಯಗೊಂಬ ಈ ಹೇರಂಬನು ಆಡಂಬರವಿಲ್ಲದೆ ಮೂರ್ತಿಯೊಳಗೆ ನೆಲೆಯಾಗಿ ಭಕ್ತಿಯಿಂದ ಬೇಡಿದವರಿಗೆ ಅಭಯ ಹಸ್ತನಾಗಿರುವನು. ಆಚಾರ್ಯತಪಸಾ, ಆಮ್ನಾಯ ಜಪೇನ ನಿಯಮೇನ ಚ। ಉತ್ಸವೇನ, ಅನ್ನದಾನೇನ ಕ್ಷೇತ್ರವೃದ್ಧಿಸ್ತು ಪಂಚಧಾ।। ಎಂಬ ಶಾಸ್ತ್ರ ವಚನವಿದೆ. ತಂತ್ರಿಯ ಭಕ್ತಿ ಶ್ರದ್ಧೆಯ ಪೂಜೆ, ತಪಸ್ಸು, ವೇದಾಧ್ಯಯನ, ಜಪ, ಹೋಮ, ವೈದಿಕ ಕರ್ಮಗಳು ಶಿಸ್ತಿನಿಂದ ನಡೆಯುವ ನಿಯಮ ಬದ್ರ, ನಿತ್ಯ ಪೂಜಾ, ರಂಗ ಪೂಜಾದಿಗಳು ಉತ್ಸವ, ಜಾತ್ರೆ ಮುಂತಾದ ಸಾಮೂಹಿಕ ಕ್ರಿಯಾ ಕಲಾಪಗಳು ಅನ್ನದಾನ ಈ ಎಲ್ಲಾ ರೀತಿಯಿಂದ ಸಾನಿಧ್ಯ ವೃದ್ಧಿಯಾಗುವುದು. ಈ ಪುತ್ತೂರಿನ ಮಹಾಲಿಂಗೇಶ್ವರನ ಪುಣ್ಯದ ಮಣ್ಣಿನಲ್ಲಿ ಕಿಲ್ಲೆ ಮೈದಾನದಲ್ಲಿ ಶ್ರೀ ದೇವತಾ ಸಮಿತಿಯ ಆಶ್ರಯದಲ್ಲಿ ನಡೆಯುವ ಈ ಮಹಾಗಣೇಶೋತ್ಸವದ ಸುವರ್ಣ ಮಹೋತ್ಸವ ಯಶಸ್ವಿಯಾಗಿ ಬರುವ ಭಕ್ತರ ಜೀವನ ಸುವರ್ಣಮಯವಾಗುವಂತೆ ಗಣಪತಿಯು ನಮ್ಮೆಲ್ಲರನ್ನೂ ಅನುಗ್ರಹಿಸಲಿ.
ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ।
ತನ್ನೋ ದಂತಿಃ ಪುಚೋದಯಾತ್||
॥ ಸರ್ವೆ ಜನಾಃ ಸುಖಿನೋ ಭವಂತು |
ಎ. ವಸಂತ ಕುಮಾರ್ ಕೆದಿಲಾಯ
ಆಕಿರೆಬರೆ
ಮುಖ್ಯ ಅರ್ಚಕರು,
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರು
Leave a Reply